ಅವಳ ಆ ನಗುವನ್ನು ಕೇಳಿ , ಅದೇನೋ ವಿಚಿತ್ರ ಭಯವು ನನ್ನನ್ನು ಸ್ವಲ್ಪ ಹೊತ್ತು ಮೌನವಾಗಿ ನಿಲ್ಲುವಂತೆ ಮಾಡಿತ್ತು .. ಹೆದರಿ ಓಡುವ ಭಯದ ಕ್ಷಣಗಳು ಆದರೂ ಸಹ ಅವಳ ಸೌಂದರ್ಯ ನನ್ನನ್ನು ನಿಂತಲ್ಲೇ ನಿಲ್ಲುವಂತೆ ಮಾಡಿತ್ತು .. ಅವಳು ನಗು ನಗುತ್ತಾ ಕಿಟಕಿಯ ಬಳಿ ಬಂದು , ಮೊದಲು ನಿನ್ನ ಹೆಸರು ಏನು , ನೀನು ಯಾರು , ಏನು ಕೆಲಸ , ಯಾವ ಊರು , ಇಷ್ಟು ಧೈರ್ಯದಲ್ಲಿ ಇಲ್ಲಿ ನಿಂತಿರುವೆ ಎಂದರೆ ನೀನು ಈ ಊರಿನವನಲ್ಲ ಎಂದು ತಿಳಿಯುತ್ತದೆ , ಈ ಮನೆಯ ಹತ್ತಿರ ಏಕೆ ಬಂದೆ ........ ಹೀಗೆ ಇನ್ನೂ ಅನೇಕ ಪ್ರಶ್ನೆಗಳು ಅವಳಿಂದ ಕೇಳಿದಾಗ ನನಗೇನು ಮಾಡಬೇಕು ಎಂಬುದೇ ತೋಚಲಿಲ್ಲ.. ಅವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿದ್ದವು .. ಸಹಾಯ ಮಾಡು ಎಂದು ಕೂಗಿದವಳು ಮತ್ತೆ ಈ ರೀತಿ ನನ್ನನ್ನೇ ಪ್ರಶ್ನೆ ಕೇಳುವುದು ಅದೆಷ್ಟು ಸರಿ ಎಂದು ನಾನು ಯಾವ ಉತ್ತರಗಳನ್ನು ಕೊಡಬೇಕೋ ಎಂಬುದೇ ಅರಿಯದವನಂತೆ , ಬಾಯಿ ತೆಗೆದು ನಾನು ಎಂದು ಹೇಳಿದೆ ಆದರೂ ಮತ್ತೊಮ್ಮೆ ಮೌನವು ನನ್ನನ್ನು ತನ್ನ ಜಾಲದಲ್ಲಿ ಸೆರೆ ಹಿಡಿಯಿತು.. ಅವಳು ತಕ್ಷಣ ಹೆದರಬೇಡ ನಾನೇನು ಮಾಡುವುದಿಲ್ಲ , ನಿನ್ನಂತಹಾ ಧೈರ್ಯವಂತರು ಬರಲಿ ಎಂದು ನಾನು ಕಾಯುತ್ತಿದ್ದೆ , ನನ್ನ ಬಗ್ಗೆ ತಿಳಿಸುವ ಮೊದಲು ನೀನು ನಿನ್ನ ಪರಿಚಯ ಹೇಳಬೇಕು , ನಿನ್ನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ , ನಾನು ನಂತರವೇ ನನ್ನ ಸಮಸ್ಯೆ ಏನು ಎಂದು ಹೇಳುವೆ ಮತ್ತು ನೀನು ನನ್ನನ್ನು ಇಲ್ಲಿಂದ ಕಾಪಾಡುವ ಶಕ್ತಿ ಯುಕ್ತಿಗಳು ನಿನ್ನಲ್ಲಿ ಇದೆಯೋ ಇಲ್ಲವೋ ಎಂಬುದು ತಿಳಿಯಬೇಕು ..... ಆ ಸುಂದರ ರೂಪವು ನನ್ನಲ್ಲಿ ಸ್ವಲ್ಪ ಸ್ವಲ್ಪ ಧೈರ್ಯ ತುಂಬುತ್ತ , ನನ್ನ ಮಾತನಾಡಿಸುವ ಆ ಕ್ಷಣಗಳು ನಾನೊಬ್ಬ ಅತ್ಯದ್ಭುತ ಕ್ಷತ್ರಿಯ ಎಂಬ ಭಾವನೆಗಳನ್ನು ಮೆಲ್ಲನೇ ನನ್ನಲ್ಲಿ ಮೂಡಿಸಲಾರಂಭಿಸಿದವು .. ಆ ಮಾತುಗಳು ನನ್ನ ಮೌನವನ್ನು ದೂರ ತಳ್ಳುವಂತೆ ಮಾಡಿ , ನಾಲಿಗೆಯು ನರ್ತಿಸುವಂತೆ ಮಾಡಿತ್ತು.. ಪಟಪಟನೆ ಮಾತನಾಡಲು ಶುರು ಮಾಡಿದ ನಾನು ಅವಳಿಗೆ ನನ್ನ ಕಥೆ ಹೇಳಲು ಪ್ರಾರಂಭಿಸಿದೆ...ಒಂದರೆಕ್ಷಣ ನಿಜ ಹೇಳುವುದು ಬೇಡವೆಂದು ನನ್ನ ಮನಸ್ಸು ನನ್ನೊಡನೆ ಹೇಳಿದಂತೆ ಭಾಸವಾಯಿತು .. ತಕ್ಷಣವೇ ನಿಂತಲ್ಲೇ ಒಂದು ಸುಳ್ಳು ಕಥೆಯನ್ನು ಸೃಷ್ಟಿಸುತ್ತಾ ಅದರಲ್ಲಿ ನನ್ನ ಪಾತ್ರವನ್ನು ಹೆಚ್ಚು ಧೈರ್ಯವಂತ , ವೀರಾಧಿವೀರ , ಅಪ್ರತಿಮ ಬುದ್ದಿವಂತ , ಯುದ್ಧ ಕಲೆಯಲ್ಲಿ ಸಂಪೂರ್ಣ ನುರಿತವನು , ಹೆಚ್ಚು ಜನರಿಗೆ ಅದನ್ನು ತಿಳಿಸಿದವನು ಎಂಬ ಮಾತುಗಳನ್ನೆಲ್ಲಾ ಲೀಲಾಜಾಲವಾಗಿ ಅವಳೆದುರು ಹೇಳತೊಡಗಿದೆ..
ಆ ನನ್ನ ಸುಳ್ಳು ಕಥೆ : ನಾನು ಈ ಊರಿನವನಲ್ಲ . ನನ್ನ ಹೆಸರು ಶ್ರೀಹರಿಕೃಷ್ಣ .... ನಮ್ಮದು ರಾಜವಂಶ , ಕೆಳದಿ ಸಂಸ್ಥಾನದಲ್ಲಿ ಮಹಾರಾಜ ಸೋಮಶೇಖರ ನಾಯಕರ ಆಪ್ತ ಮಿತ್ರವರ್ಗದವದು .. ಕೆಳದಿ ಆಸ್ಥಾನದಲ್ಲಿ ನಮ್ಮ ಮುತ್ತಾತ , ತಾತ , ಅವರ ಚಿಕ್ಕಪ್ಪ , ಅವರ ದೊಡ್ಡಮ್ಮ , ಹೀಗೆ ಎಲ್ಲರೂ ತುಂಬಾ ಸೇವೆಯನ್ನು ಸಲ್ಲಿಸಿದ್ದಾರೆ .. ನಮ್ಮ ವಂಶದವರು ಯುದ್ಧದಲ್ಲಿ ತಮ್ಮದೇ ಆದ ವಿಶೇಷ ಹೋರಾಟದಿಂದ ಶತ್ರುಗಳ ಸದೆಬಡಿದು , ವಿಜಯವನ್ನು ಕೆಳದಿಯ ಪಾಲಾಗಿಸಿದ್ದಾರೆ .. ಕ್ಷತ್ರೀಯ ಕುಲದವರಾದ ನಮ್ಮಲ್ಲಿ ಹರಿಯುತ್ತಿರುವುದು ಕ್ಷತ್ರೀಯ ರಕ್ತ .. ಆದರೆ ಕಾಲವೆಂಬುದು ಸರಿಯಿಲ್ಲವಲ್ಲ .. ಇತಿಹಾಸ ರಚಿಸುವ ಬರಹಗಾರರು ಎಲ್ಲಿಯೂ ನಮ್ಮ ಬಗ್ಗೆ ಹೆಚ್ಚಾಗಿ ಉಲ್ಲೇಖ ಮಾಡಲಿಲ್ಲ .. ಹೀಗಾಗಿ ನಾವು ಇತಿಹಾಸದ ಪುಟಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.. ಯಾರೀಗೂ ಹೆಚ್ಚು ತಿಳಿಯದೇ ಎಲ್ಲೋ ಮರೆಯಾಗಿ ಹೋದೆವು.......
ಹೀಗೆ ಹೇಳುತ್ತಾ ಒಂದು ಕ್ಷಣ ಮಾತ್ರ ನಾನೇನು ಹೇಳಿದೆ ಅವಳಿಗೆ ಎಂಬುದೆಲ್ಲವನ್ನೂ ಮರೆತು ನಾನು ನಿಜಕ್ಕೂ ಕ್ಷತ್ರೀಯ ಎಂಬ ಭಾವನೆ ನನ್ನಲ್ಲಿ ಆವರಿಸಿತ್ತು.. ಆದರೆ ನಾನು ಹೇಳುವ ಪ್ರತೀ ಮಾತುಗಳನ್ನು ತುಂಬಾ ಮಗ್ನಳಾಗಿ ಕೇಳುತ್ತಿದ್ದ ಅವಳನ್ನು ನೋಡಿದಾಗ , ವಿಭಿನ್ನ ಬಗೆಯ ಆಕರ್ಷಣೆ ನನ್ನ ಅವಳತ್ತ ಹೆಚ್ಚು ಹೆಚ್ಚು ಸೆಳೆಯುತ್ತಿತ್ತು.. ಸ್ವಲ್ಪ ಹಾಗೆಯೇ ನನ್ನ ಮಾತುಗಳನ್ನು ನಿಲ್ಲಿಸಿ , ಅವಳನ್ನೇ ನೋಡುತ್ತಾ ನಿಂತುಬಿಟ್ಟೆ .. ಆರೇಳು ನಿಮಿಷಗಳು ಆಗಿತ್ತೇನೋ , ಅವಳು ಮುಂದೇನು ಹೇಳು , ನೀನು ಈ ಊರಿಗೆ ಏಕೆ ಬಂದೆ , ಈ ಮನೆಯ ಹತ್ತಿರ ಏಕೆ ಬಂದೆ ... ಹೀಗೆ ಕೇಳಲು ಅವಳು ನನ್ನ ತಲೆಯಲ್ಲಿ ಏನೇನೋ ಆಲೋಚನೆಗಳ ಕೋಲಾಹಲ .. ಏನಾದರೂ ಹೇಳಲೇಬೆಕಲ್ಲಾ ಎಂದು ಮುಂದುವರೆಸಿದೆ .. ನಾನು ದೇವನಗರಿಯವನು ಅದು ಇಲ್ಲಿಂದ ಸುಮಾರು ನೂರೈವತ್ತು ಕಿಲೋಮೀಟರ್ ದೂರವಿದೆ.. ನಾನು ಇಲ್ಲಿ ಬರಲು ಕಾರಣ ನಮ್ಮ ಸಂಬಂಧಿಕರ ಆಸ್ತಿ ವ್ಯವಹಾರ .. ಅವರ ಹಿರಿಯರು ಬಾಳಿ ಬದುಕಿದ ಊರಿದು .. ಇಲ್ಲಿ ಒಂದು ಕೈಗಾರಿಕೆಯನ್ನು ಆರಂಭಿಸಿ , ಇಲ್ಲಿಯೇ ಕೆಲವು ವರ್ಷಗಳ ಕಾಲ ಉಳಿಯುವ ಆಲೋಚನೆ ಅವರದು .. ಅದಕ್ಕೆ ತುಂಬಾ ವಿಶಾಲವಾದ ಸ್ಥಳವನ್ನು ನೋಡಬೇಕೆಂದು ಈ ಊರಿಗೆ ಅವರೊಡನೆ ಬಂದೆ .. ಹಾಗೆಯೇ ಊರನ್ನೆಲ್ಲಾ ನೋಡುತ್ತಾ ಒಂದು ಸುತ್ತು ಹಾಕಿ ಬರುತ್ತದೆ , ಈ ಕಡೆಯಿಂದ ಗೆಜ್ಜೆಯ ಸದ್ದು ಕೇಳಿದಂತಾಗಿ ಇಲ್ಲಿ ಬಂದೆ ಮತ್ತು ಮುಂದಿನದೆಲ್ಲಾ ನಿನಗೆ ಗೊತ್ತಿದೆಯಲ್ಲ... ಇನ್ನೇನು ಉಳಿದಿಲ್ಲಾ ಹೇಳಲು ಮತ್ತು ಈ ಮನೆಯ ಕಡೆ ಹೋಗಬೇಡಿ ಎಂಬ ಮಾತುಗಳು ಊರ ಜನರು ತುಂಬಾ ಹೇಳಿದರು ಹಾಗು ಈ ಮನೆಯ ಬಗ್ಗೆ ಏನೇನೋ ಕಥೆಗಳನ್ನು ಹೇಳಿದ್ದರು .. ಆದರೂ ಆ ಸದ್ದು ಮತ್ತು ಬೆಳಕು , ನನ್ನನ್ನು ಇಲ್ಲಿಯವರೆಗೂ ಬರುವಂತೆ ಮಾಡಿದವು ಎಂದು ಹೇಳಿ , ಅವಳನ್ನೇ ನೋಡುತ್ತಾ , ಅವಳ ಉತ್ತರಕ್ಕಾಗಿ ಕಾಯುತ್ತಿದ್ದೆ .... ನಾನು ಹೇಳಿದ ಪ್ರತೀ ಮಾತುಗಳನ್ನು ಸತ್ಯವೆಂದು , ನಾನು ನಿಜಕ್ಕೂ ಕ್ಷತ್ರೀಯ ವಂಶದವನು ಎಂದು ನಂಬಿದ ಅವಳ ಮಾತುಗಳಲ್ಲಿ ಹೆಚ್ಚು ಆತ್ಮೀಯತೆ ಇದ್ದಂತೆ ಮಾತನಾಡಿಸಲು ಶುರು ಮಾಡಿದಳು .. ನಿನ್ನನು ಸಂಪೂರ್ಣ ನಂಬುತ್ತೇನೆ , ನೀನು ಹೇಳಿದ ಕಥೆಯನ್ನು ಕೇಳಿದ ಮೇಲೆ ನಾನ್ಯಾರು ಮತ್ತು ಇಲ್ಲಿ ಹೇಗೆ ಬಂದೆ .. ಈ ಕಷ್ಟದಲ್ಲಿ ಸಿಲುಕಲು ಏನು ಕಾರಣ ಎಲ್ಲವನ್ನು ಹೇಳುತ್ತೇನೆ .. ಆದರೆ ನೀನು ನನಗೆ ಕಥೆ ಕೇಳಿದ ಮೇಲೆ ಮೋಸ ಮಾಡಬಾರದು ಏಕೆಂದರೆ ಇದು ಮೂರು ಸಾವಿರ ವರ್ಷಗಳ ಹಿಂದಿನ ಮಾತು ಎಂದು ಅವಳು ಹೇಳಿದ ತಕ್ಷಣವೇ ಮತ್ತೆ ವಿಚಿತ್ರ ಆಶ್ಚರ್ಯ ಮತ್ತು ಕುತೂಹಲ ಅವಳನ್ನು ನೋಡುತ್ತಾ ನಿಂತಲ್ಲೇ ನಡುಗಿದೆ .. ನನ್ನ ನಡುಕವನ್ನು ಗಮನಿಸಿದ ಅವಳು ಈ ಮಾತುಗಳನ್ನು ಕೇಳಿ ನಡುಗಬೇಡ , ಸತ್ಯವಾಗಿಯೂ ಇದು ಮೂರುಸಾವಿರ ವರ್ಷಗಳ ಹಿಂದಿನ ಘಟನೆ , ಅಲ್ಲಿಂದಲ್ಲೇ ಈ ಸಮಸ್ಯೆಯ ಆರಂಭ , ಆದರೆ ನಾನು ಅಷ್ಟು ವರ್ಷದವಳಲ್ಲಾ , ನನಗಿನ್ನೂ ತುಂಬಾ ಚಿಕ್ಕ ವಯಸ್ಸು , ನಾನು ಇಪ್ಪತ್ತೆಂಟು ವರ್ಷದವಳು , ಆದರೆ ಈ ಮನೆಯ ಕಥೆ ಮತ್ತು ಇಲ್ಲಿನ ಸಮಸ್ಯೆ ತಲತಲಾಂತರಗಳಿಂದ ನಡೆದು ಬಂದದ್ದು ಮತ್ತು ಈಗ ನನ್ನಲ್ಲಿ ಬಲಿಪಶುವಾಗಿ ಮಾಡಿದ್ದಾರೆ .. ಈ ಮನೆಯ ಬಗ್ಗೆ ಹೇಳಲು ಹೆಚ್ಚು ಸಮಯ ಬೇಕು , ಈ ದಿನ ಸಾಧ್ಯವಿಲ್ಲ , ಈಗಾಗಲೇ ಬೆಳಕಾಗುವ ಸಮಯ , ನೀನು ನಾಳೆ ರಾತ್ರಿ ಬೇಗನೆ ಇಲ್ಲಿ ಬಾ .. ಮತ್ತು ಯಾರಿಗೂ ತಿಳಿಸಬೇಡ , ನೀನೊಬ್ಬನೇ ಬಾ , ನೀನು ಬಂದೇ ಬರುವೆ ಎನ್ನುವ ನಂಬಿಕೆ ನನ್ನಲ್ಲಿದೆ ಹಾಗೂ ನಿನಗಾಗಿ ಕಾಯುತ್ತ ಇರುತ್ತೇನೆ .. ಎಂದು ಅವಳು ಹೇಳಿದ ತಕ್ಷಣಕ್ಕೆ ನಾನು ನನಗರಿವಿಲ್ಲದಂತೆಯೇ ಎಲ್ಲದಕ್ಕೂ ತಲೆಯಾಡಿಸಿ ಒಪ್ಪಿಕೊಂಡು , ಸರಿ ನಾನು ಖಂಡಿತ ನಾಳೆ ಬರುವೆ ಎಂದು ಹೇಳಿ ಅಲ್ಲಿಂದ ಬೇಗಬೇಗನೇ ಹೊರಟು ಬಂದೆ.. ಯಾರು ಸಹ ನನ್ನನ್ನು ಆ ಕಿಟಕಿಯ ಬಳಿ ನಿಂತು ಮಾತನಾಡುವುದನ್ನು ನೋಡಿಲ್ಲಾ ಎಂಬ ಸಮಾಧಾನವು ಮತ್ತು ನಾಳೆ ಅವಳ ಬಳಿ ಹೋಗುವುದೋ ಬೇಡವೋ ಎಂಬ ಗೊಂದಲಮಯ ಚಿಂತನೆಗಳು , ಜೊತೆಯಲ್ಲಿ ಆಸ್ತಿ ವ್ಯವಹಾರದ ಕೆಲಸ , ಹೀಗೆಲ್ಲಾ ಅನೇಕ ಆಲೋಚನೆಯಲ್ಲಿ ನಾನು ಮನೆಯತ್ತ ಹೋಗುತ್ತಿದ್ದಂತೆಯೇ , ಅಲ್ಲಿದ್ದ ನನ್ನ ಸಂಬಂಧಿಕರು ಮತ್ತು ಊರ ಜನರೆಲ್ಲಾ ಎಲ್ಲಿ ಹೋಗಿದ್ದೆ ರಾತ್ರಿಯೆಲ್ಲಾ , ಆ ಮನೆಯ ಹತ್ತಿರ ಏನಾದರೂ ಹೋಗಿದ್ದೆಯಾ , ಆ ಕಡೆ ಹೋಗುವುದು ಬೇಡ ಎಂದು ಹೇಳಿದ ಮೇಲೂ ಅಲ್ಲಿ ಹೋಗುವ ಸಾಹಸ ನೀನೇಕೆ ಮಾಡಿದ್ದು ... ಎಂದೆಲ್ಲಾ ಕೇಳಲು ಶುರು ಮಾಡಿದರು .. ನಾನು ಸಹ ಸದ್ಯಕ್ಕೆ ಈಗೇನು ಕೇಳಬೇಡಿ , ತುಂಬಾ ನಿದ್ದೆ ಬರುತ್ತಿದೆ , ರಾತ್ರಿ ನಿದ್ದೆ ಮಾಡಿಲ್ಲಾ , ಸ್ವಲ್ಪ ಹೊತ್ತು ಮಲಗಿ ಆಮೇಲೆ ಎಲ್ಲರಿಗೂ ಉತ್ತರಿಸುವೆ ಎಂದು ಹೇಳಿ ಹೋಗಿ , ನನ್ನ ರೂಮಿನಲ್ಲಿ ನಿದ್ದೆ ಮಾಡಿದೆ.. ಸಂಜೆ ನಾಲ್ಕು ಗಂಟೆಯಲ್ಲಿ ಎದ್ದ ನಂತರ ನಮ್ಮ ಅತ್ತೆಯವರು ಊಟಕ್ಕೆ ಕರೆದರು.. ನಾನು ಊಟ ಮುಗಿಸಿದೆ .. ಆರಾಮಾಗಿ ಮನೆಯ ಪಕ್ಕದ ಪಾರ್ಕಿನಲ್ಲಿ ಸ್ವಲ್ಪ ಹೊತ್ತು ಓಡಾಡಿ ಬರಲು ಹೋದೆ.. ಆಗ ಜನರೆಲ್ಲರೂ ನನ್ನ ಸುತ್ತುವರೆದರು , ಎಲ್ಲರೂ ಒಬ್ಬೊಬ್ಬರೇ ಆ ಮನೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ನಾನು ನನಗೇನು ಆ ಕ್ಷಣಕ್ಕೆ ತಿಳಿದದ್ದೋ ಅದನ್ನೇ ಉತ್ತರಿಸುತ್ತ ಎಲ್ಲರನ್ನು ಸಮಾಧಾನ ಮಾಡಿದೆ .. ಆಗ ತಿಳಿದದ್ದು ಒಂದು ವಿಚಾರ ಆ ಮನೆಯ ಹತ್ತಿರ ಹೋಗಲು ಎಲ್ಲರೂ ಹೆದರುತ್ತಾರೆ .. ಅದು ದೆವ್ವದ ಮನೆ ಎಂದು ಊರೆಲ್ಲಾ ನಂಬಿದೆ.. ಇನ್ನು ಈ ರಾತ್ರಿ ನಾನು ಆ ಮನೆಯ ಬಳಿ ಹೋಗಲು ಯಾರು ಸಹ ಬಿಡುವುದಿಲ್ಲ ಮತ್ತು ಆ ಮನೆಯ ಕಿಟಕಿಯ ಹತ್ತಿರ ನಡೆದ ವಿಚಾರವನ್ನು ತಿಳಿಸುವ ಮನಸ್ಸಿದ್ದರೂ ಸಹ ಆ ಚೆಲುವಿನ ಮೊಗವು , ಅವಳ ಸೊಬಗಿನ ಸೌಂದರ್ಯ ನನ್ನನ್ನು ಯಾವುದನ್ನೂ ಹೇಳದಂತೆ ತಡೆಯಿತು .. ಮತ್ತು ಈ ರಾತ್ರಿ ಅವಳ ಕಥೆ ಕೇಳುವ ಕುತೂಹಲಕ್ಕೆ ಮತ್ತಷ್ಟು ಜೀವ ಬಂದಂತೆ , ಅದು ನನ್ನನ್ನು ಆ ಮನೆಯತ್ತ ಹೋಗಲು ಪ್ರೇರೇಪಿಸುತ್ತಿತ್ತು.. ಎಲ್ಲರ ಕಣ್ತಪ್ಪಿಸಿ , ಯಾರಿಗೂ ಸುಳಿವೇ ಸಿಗದಂತೆ ಆ ಮನೆಯ ಬಳಿ ಈ ರಾತ್ರಿ ಹೇಗೆ ಹೋಗುವುದು ಎಂಬ ಆಲೋಚನೆಯ ಚಿಂತನೆಯಲ್ಲಿಯೇ ಮನೆಗೆ ಹೋಗಿ ಬೇಗನೇ ಊಟ ಮುಗಿಸಿ ಮತ್ತು ಅವಳಿಗೂ ತಿನ್ನಲು ಸ್ವಲ್ಪ ಕಟ್ಟಿಕೊಂಡು ಹೋಗೋಣವೆಂಬ ವಿಚಾರವನ್ನು ನೆನೆಯುತ್ತಾ , ಪಾರ್ಕಿನಿಂದ ಮನೆಗೆ ಹೋದೆ.. ಮತ್ತು ಹೋಗುವಾಗ ದಾರಿಯಲ್ಲಿ ಆ ದೆವ್ವದ ಮನೆಯ ದಾರಿಯನ್ನು ಗಮನಿಸುತ್ತಾ , ಯಾರಿಗೂ ತಿಳಿಯದಂತೆ ಹೇಗೆ ಆ ದೆವ್ವದ ಮನೆ ಹತ್ತಿರ ಹೋಗುವುದು ಎಂಬ ಯೋಜನೆಯನ್ನು ಹಾಕಿಕೊಳ್ಳುತ್ತಾ ಮನೆ ತಲುಪಿದೆ.....
(ಮುಂದುವರೆಯುವುದು .... )